Sports
oi-Rajesha MB
ಬರ್ಮಿಂಗ್ಹ್ಯಾಮ್ , ಆಗಸ್ಟ್ 6: ಇದೇ ಮೊದಲ ಬಾರಿಗೆ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಅವಕಾಶ ಪಡೆದಿರುವ ಕ್ರಿಕೆಟ್ನಲ್ಲಿ ಭಾರತದ ವನಿತೆಯರ ತಂಡ ಅತಿಥೇಯ ಇಂಗ್ಲೆಂಡ್ ಮಣಿಸಿ ಫೈನಲ್ ಪ್ರವೇಶಿಸುವ ಮೂಲಕ ಪದಕ ಖಚಿತಪಡಿಸಿಕೊಂಡಿದೆ.
ಶನಿವಾರ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ವನಿತೆಯರು 4 ರನ್ಗಳ ರೋಚಕ ಜಯ ಸಾಧಿಸಿ ಚಿನ್ನದ ಸುತ್ತಿಗೆ ತೇರ್ಗಡೆಯಾದರು.
ಕಾಮನ್ವೆಲ್ತ್ ಗೇಮ್ ಮುಖ್ಯವಲ್ಲ: ಬಾಕ್ಸಿಂಗ್ನಲ್ಲಿ ಸೋತ ಬಳಿಕ ಲೊವ್ಲಿನಾ ಬೊರ್ಗೊಹೈನ್ ಹೇಳಿಕೆ
ಎಡ್ಜ್ಬಾಸ್ಟನ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತೆಯರು 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಕಲೆ ಹಾಕುವುದರ ಮೂಲಕ ಬಲಿಷ್ಠ ಇಂಗ್ಲೆಂಡ್ ವನಿತೆಯರಿಗೆ 165 ರನ್ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು. ನಂತರ ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಮೂಲಕ ಹರ್ಮನ್ ಪ್ರೀತ್ ಬಳಗ 4 ರನ್ಗಳ ರೋಚಕ ಜಯ ಸಾಧಿಸಿದ್ದು ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದ ಚೊಚ್ಚಲ ಕ್ರಿಕೆಟ್ ಆವೃತ್ತಿಯಲ್ಲಿಯೇ ಫೈನಲ್ ಲಗ್ಗೆಯಿಡುವ ಮೂಲಕ ಪದಕ ಖಚಿತಪಡಿಸಿಕೊಂಡಿತು.
ಭಾರತದ ಪರ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ 32 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 61, ಜೆಮಿಮಾ ರೋಟ್ರಿಗಸ್ 31 ಎಸೆತಗಳಲ್ಲಿ44, ನಾಯಕಿ ಹರ್ಮನ್ ಪ್ರೀತ್ ಕೌರ್ 20 ಎಸೆತಗಳಲ್ಲಿ 20, ದೀಪ್ತಿ ಶರ್ಮಾ 20 ಎಸೆತಗಳಲ್ಲಿ 22 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಗಿದ್ದರು.
ಇಂಗ್ಲೆಂಡ್ ಪರ ನ್ಯಾಟ್ ಸೀವರ್ 41 ರನ್, ಡ್ಯಾನಿಯಲ್ ವೇಟ್ 35 ಹಾಗೂ ಆಮಿ ಜೋನ್ಸ್ 31 ರನ್ಗಳಿಸಿ ಗೆಲುವಿಗಾಗಿ ನಡೆಸಿದ ಹೋರಾಟ ವಿಫಲವಾಯಿತು. ಭಾರತದ ಬರ ಸ್ನೇಹ್ ರಾಣಾ 28ಕ್ಕೆ2, ದೀಪ್ತಿ ಶರ್ಮಾ 18ಕ್ಕೆ1 ವಿಕೆಟ್ ಪಡೆದರು. ಕ್ಷೇತ್ರ ರಕ್ಷಣೆಯಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತೀಯ ಆಟಗಾರ್ತಿಯರು ಮೂರು ರನ್ಔಟ್ ಮಾಡಿ ನಿರ್ಣಾಯಕ ಬ್ಯಾಟರ್ಗಳನ್ನು ಪೆವಿಲಿಯನ್ಗಟ್ಟಿ ಗೆಲುವು ತಮ್ಮದಾಗಿಸಿಕೊಂಡರು.
ಇನ್ನು ಶನಿವಾರವೇ 2ನೇ ಸೆಮಿಫೈನಲ್ ಪಂದ್ಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವೆ ನಡೆಯಲಿದೆ. ಈ ಪೈಪೋಟಿಯಲ್ಲಿ ಗೆದ್ದ ತಂಡ ಭಾರತದ ವಿರುದ್ಧ ಭಾನುವಾರ ಚಿನ್ನಕ್ಕಾಗಿ ಪೈಪೋಟಿ ನಡೆಸಲಿವೆ.
ಇನ್ನು ಭಾರತೀಯ ವನಿತಾ ತಂಡ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿದ್ದಕ್ಕೆ ಕ್ರಿಕೆಟ್ ಬಳಗ ಅಭಿನಂದನೆ ಸಲ್ಲಿಸಿದೆ. ಭಾರತೀಯ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್, ಮಾಜಿ ಮಹಿಳಾ ಕ್ರಿಕೆಟರ್ ಅಂಜುಮ್ ಚೊಪ್ರಾ, ಮಾಜಿ ವಿಂಡೀಸ್ ಕ್ರಿಕೆಟರ್ ಇಯಾನ್ ಬಿಷಪ್ , ಮಾಜಿ ಕ್ರಿಕೆಟಿಗ ವಸೀಂ ಜಾಫರ್, ಆಕಾಶ್ ಚೋಪ್ರಾ, ಪಾರ್ಥೀವ್ ಪಟೇಲ್ , ಅಮಿತ್ ಮಿಶ್ರಾ ಸೇರಿದಂತೆ ಹಲವಾರು ಮಾಜಿ ಹಾಗೂ ಹಾಲಿ ಕ್ರಿಕೆಟರ್ಸ್ ಫೈನಲ್ಗೆ ಶುಭಕೋರಿದ್ದಾರೆ.
English summary
Indian women’s cricket team has created history after secured the country’s first-ever medal in Commonwealth Games.Indian team have reached the gold medal match after beating hosts England in semifinal,
Story first published: Saturday, August 6, 2022, 20:09 [IST]